ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
08-04-2025
ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ 2019ರ ಬಳಿಕ ಗೆದ್ದಿರಲಿಲ್ಲ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ 2008ರ ಮೊದಲ ಐಪಿಎಲ್ ಆವೃತ್ತಿಯ ಬಳಿಕ ಆರ್‌ಸಿಬಿಗೆ ಇಲ್ಲಿ ಗೆಲುವು ದಕ್ಕಿರಲಿಲ್ಲ. ಮುಂಬೈನಲ್ಲಿ ಆರ್‌ಸಿಬಿ ಕೊನೆಯ ಬಾರಿ ಗೆದ್ದಿದ್ದು 2015 ರಲ್ಲಿ. ಆದರೆ ಈ ಬಾರಿ ಮೂರು ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ.
ಮೊದಲ ಪಂದ್ಯದಲ್ಲಿ ಕೋಲ್ಕತ್ತಾ (KKR) ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಚೆನ್ನೈ (CSK) ವಿರುದ್ಧ 50 ರನ್‌ಗಳಿಂದ ಗೆದ್ದು ಬೀಗಿತ್ತು. ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (GT) ವಿರುದ್ಧ ಆರ್‌ಸಿಬಿ ಸೋತಿತ್ತು. ಈಗ ಮುಂಬೈ (MI) ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲಿ ರೋಚಕ 12 ರನ್ ಗಳಿಂದ ಗೆದ್ದು ಬೀಗಿದೆ.
ಚೆನ್ನೈ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟವಾಡಿದ ನಾಯಕ ರಜತ್ ಪಾಟಿದರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಚೆನ್ನೈ ವಿರುದ್ಧ ರಜತ್ ಪಟೀದಾರ್ 51 ರನ್(32 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆದರೆ ಮುಂಬೈ ವಿರುದ್ಧ 64 ರನ್ (32 ಎಸೆತ, 5 ಬೌಂಡರಿ, 4 ಸಿಕ್ಸ್) ಚಚ್ಚಿದ್ದರು.
ಸೋಮವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಬಾರಿಸಿತ್ತು. 222 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಂದೆ ಆರ್‌ಸಿಬಿ ಏ.10 ರಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಡಲಿದೆ.
ಅಂಕಪಟ್ಟಿಯಲ್ಲಿ ಆರ್‌ಸಿಬಿ 6 ಅಂಕ ಸಂಪಾದಿಸಿದರೂ ನೆಟ್ ರನ್ ರೇಟ್‌ನಲ್ಲಿ ಹಿಂದಿರುವ ಕಾರಣ ಮೂರನೇ ಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದ್ದರೆ 4 ಪಂದ್ಯವಾಡಿ ಮೂರರಲ್ಲಿ ಜಯಗಳಿಸಿರುವ ಗುಜರಾತ್ ಎರಡನೇ ಸ್ಥಾನದಲ್ಲಿದೆ.
